ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗೇ?

ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗೇ?

ಎಲ್ಲರೂ ಮಾಡುವುದು ಗೇಣು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ನಾಣ್ಣುಡಿ  ಇದೆ. ನಿಜ ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಜೀವಿಯ ಮೊಟ್ಟ ಮೊದಲ ಮೂಲಭೂತ ಆಸೆ ಅಂದರೆ ಹಸಿವನ್ನು ನೀಗಿಸಿಕೊಳ್ಳುವುದು. ಮೇಲಿನ ಗಾದೆಯಂತೆ, ಗೇಣು ಹೊಟ್ಟೆಯನ್ನು ತುಂಬಿಸದೇ ಹೋದಲ್ಲಿ ಜೀವವೂ ಇಲ್ಲ, ಜೀವನವೂ ಇಲ್ಲ! ಆದರೆ, ಅದೇ ತುತ್ತು ಆಹಾರಕ್ಕಾಗಿ ಪರದಾಡುವ ಪರಸ್ಥಿತಿ ನಮ್ಮ ದೇಶದಲ್ಲಿ ಸಾಕಷ್ಟು ಹೆಚ್ಚಾಗಿದೆ.

ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗೇ?
Global Hunger Index, 2019


ಹಸಿವಿನಿಂದಲೇ  ಇಡೀ ದೇಶದಲ್ಲಿ ದಿನ ಒಂದಕ್ಕೆ  ಸುಮಾರು 7000 ಸಾವಿರ ಮತ್ತು ವರ್ಷಕ್ಕೆ ಸುಮಾರು  25 ಲಕ್ಷ ಜನ ಮರಣ ಹೊಂದುತ್ತಿದ್ದಾರೆ.  ಸಾಮಾನ್ಯವಾಗಿ  ನಮ್ಮ ದೇಶದಲ್ಲಿ ಹಸಿವಿಗಾಗಿ ಭಿಕ್ಷೆ ಬೇಡುವವರ ಸಂಖ್ಯೆ ಅತಿ ಹೆಚ್ಚಾಗಿದೆ. ಭಿಕ್ಷಾಟನೆ ದೃಶ್ಯಗಳು ದೇಶದ ಯಾವುದೇ ರೈಲ್ವೇ, ಬಸ್ಸು ನಿಲ್ದಾಣಗಳಲ್ಲಿ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ಬೀದಿ ಬದಿಯಲ್ಲಿ , ರಸ್ತೆಯಲ್ಲಿ,  ದೇವಸ್ಥಾನ  ಮುಂಭಾಗದಲ್ಲಿ, ಪಾರ್ಕ್ ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಭಿಿಕ್ಷೆ ಬೇಡುವವರ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ.

ಆದರೆ ಒಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ, ಕೆಲವರು ಕಣ್ಣು-ಕಾಲು ಕಳೆದುಕೊಂಡು ಅಸಹಾಯಕರಾಗಿ ದುಡಿಯಲು ಸಾಧ್ಯ ಆಗದೆ ತಮ್ಮ ಜೀವನ ಸಾಗಿಸಲು ಅಸಾಯಕರಾಗಿ ದಾರಿಯಲ್ಲಿ ಹೋಗುವವರಿಗೆ ಅಂಗಲಾಚಿ ಬೇಡಿಕೊಳ್ಳುತ್ತಿರುತ್ತಾರೆ. ಅವರ ಮುಂದೆ ಒಂದೆರಡು ರೂಪಾಯಿ ನಾಣ್ಯ ಗಳು ಬಿದ್ದಿರುತ್ತವೆ. ಅವರಿಗೆ ಅದರಿಂದ ಹಸಿವು ನೀಗುತ್ತೋ ಬಿಡುತ್ತೋ ಆ ದೇವರೇ ಬಲ್ಲ!

ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗೇ?

ಕಣ್ಣು ಇಲ್ಲದವರು ಬಸ್ಸುಗಳಲ್ಲಿ, ರೈಲ್ವೇಗಳಲ್ಲಿ ಬಂದು  ತಮಗೆ ಹಾಡಲು ಗೊತ್ತಿರುವ ಯಾವುದೋ ಹಾಡನ್ನು ಹಾಡುತ್ತ ಭಿಕ್ಷಾಟನೆ ಮಾಡುತ್ತಾರೆ. ಕೆಲ ಪ್ರಯಾಣಿಕರು ಆ ಹಾಡು ಕೇಳಿಯೂ ಕೇಳದಂತೆ  ಕುಳಿತುಕೊಂಡರೆ, ಒಬ್ಬಿಬ್ಬ ಹೃದಯವಂತರು ಒಂದೆರಡು ರೂಪಾಯಿ ಆ ಭಿಕ್ಷುಕರಿಗೆ ಕೊಡುತ್ತಾರೆ. ಆ ಪ್ರಯಾಣಿಕರು ಕೊಟ್ಟಷ್ಟು ತೆಗೆದುಕೊಂಡು ನಂತರ ಬರುವ ಇನ್ನೊಂದು ಬಸ್ಸಿಗೋ, ರೈಲಿಗೋ ಕಾಯುತ್ತಾ ಕೂರುವುದು. ದಿನ ಬೆಳಗಾದರೆ, ರಾತ್ರಿಯಾದ್ರೆ  ಇದೇ ಅವರ ಕೆಲಸ. ಕೇವಲ ತುತ್ತು ಅನ್ನದ ಚೀಲವನ್ನು ತುಂಬಿಸಿಕೊಳ್ಳುವದೇ ಜೀವನದ ಹೋರಾಟ ಈ ಭಿಕ್ಷುಕರದ್ದಾಗಿದೆ.

ಹಸುಗೂಸನ್ನು ಮರದ ಬುಟ್ಟಿಯಲ್ಲಿ ಇಟ್ಟುಕೊಂಡು ತಾಯಿ ಆದವಳು ಕಂಡ ಕಂಡವರಲ್ಲಿ ಅಂಗಲಾಚುತ್ತ ಬೇಡುವ ದೃಶ್ಯ ಮನ ಕಲುಕುತ್ತದೆ. ಈ ದೃಶ್ಯವನ್ನು ನಾವು ನೀವೆಲ್ಲ ಸಾಕಷ್ಟು ಕಡೆ ಕಂಡಿರುತ್ತೇವೆ.  ಕೆಲವರು ಆ ಭಿಕ್ಷುಕಿಯ ಸ್ಥಿತಿಯನ್ನು ನೋಡಿ ಮರುಗಿದರೆ, ಇನ್ನು ಕೆಲವರು ಆ ಭಿಕ್ಷುಕಿಯ ಕಡೆ ತಿರುಗಿಯೂ ನೋಡುವುದಿಲ್ಲ.  

ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗೇ?

ಎಷ್ಟೋ ಸಲ ಚಿಕ್ಕ ಮಕ್ಕಳು ಭಿಕ್ಷೆ ಬೇಡಲು ನಮ್ಮ ಬಳಿ ಬಂದು ಕಾಲಿಗೆ ಬೀಳುವ ದೃಶ್ಯ ಮನ ಕಲಕುವಂತಿರುತ್ತದೆ. ಆದರೆ ನಮ್ಮಲ್ಲೇ ಕೆಲವರು ತಮಗೂ ಮಕ್ಕಳಿವೆ ಎಂಬ ಪರಿವೇ ಇಲ್ಲದೆ,  ಆ ಭಿಕ್ಷೆ ಬೇಡುವ ಮಕ್ಕಳ  ಹಸಿವಿನ ಪರದಾಟವನ್ನು ಕನಿಷ್ಠ ಆಲಿಸುವುದೂ ಇಲ್ಲ, ನೋಡುವುದು ಇಲ್ಲ. ಇದೊಂದು ರೀತಿಯ ಕ್ರೂರ ಮನಸ್ಥಿತಿಯಂತೆ ಕಾಣುತ್ತದೆ. 

ಭಿಕ್ಷುಕರು ಭಿಕ್ಷೆ ಬೇಡಲು ಅವರ ತಟ್ಟೆಯಲ್ಲಿ ಒಂದು ದೇವರ ಫೋಟೋ ಇಟ್ಟುಕೊಂಡಿರುತ್ತಾರೆ, ಕನಿಷ್ಠ ದೇವರ ಮುಖ ನೋಡಿಯಾದರೂ ಜನ ಒಂದೆರಡು ರೂಪಾಯಿ ಹಾಕಬಹುದು ಎಂದು.  ಕೆಲವು ಜನ ಈ ಬಡಪಾಯಿ ಭಿಕ್ಷುಕರೊಂದಿಗೆ ಕುಚೇಷ್ಟೆ ಮಾಡುವುದು, ಅವರನ್ನು ಹೀಯಾಳಿಸುವುದು, ಅವಾಚ್ಯ ಶಬ್ದಗಳಿಂದ ಬೈಯುವುದು, ಅವರ ತಟ್ಟೆಯಲ್ಲಿನ ದುಡ್ಡನ್ನು ತೆಗೆದುಕೊಳ್ಳುವುದು ಹೀಗೆ  ಅವರನ್ನು ವಿನಾಕಾರಣ ಪೀಡಿಸುತ್ತಾರೆ. ಈ ರೀತಿ ಭಿಕ್ಷುಕರನ್ನು ಪೀಡಿಸುವ ದೃಶ್ಯಗಳನ್ನು ನಾನು ಸಾಕಷ್ಟು ಬಾರಿ ಕಂಡಿದ್ದೇನೆ. ಭಿಕ್ಷುಕರನ್ನು ಪೀಡಿಸುವುದಕ್ಕಿಂತ ಭಿಕ್ಷೆ ಹಾಕದೆ ಇರುವುದೇ ಎಷ್ಟೋ ಉತ್ತಮ ಕಾರ್ಯ. ಈ ರೀತಿ ಅಸಹಾಯಕ ಭಿಕ್ಷುಕರನ್ನು ಪೀಡಿಸುವವರು ಒಂದು ರೀತಿಯ ಸ್ಯಾಡಿಸ್ಟ್ ಮನೋಭಾವದವರು.

ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗೇ?
ರಾನು ಮಂಡಲ್

ಭಿಕ್ಷುಕರಲ್ಲಿಯೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ ಅವರನ್ನು ಗುರುತಿಸುವವರು ಯಾರು ಬಿಡಿ. ರಾನು ಮಂಡಲ್ ಎಂಬ ಹೆಸರು ಕೇಳಿರಬೇಕಲ್ಲವೇ ನೀವೆಲ್ಲ? ಇವರು ಮಹಾರಾಷ್ಟ್ರದಲ್ಲಿ ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುತ್ತ ಭಿಕ್ಷೆ ಬೇಡುತ್ತಿದ್ದ ಒಬ್ಬ ಭಿಕ್ಷುಕಿ. ಅವರನ್ನು ಯಾರೋ ಒಬ್ಬ ಪುಣ್ಯಾತ್ಮ ಗುರುತಿಸಿದರು. ಅದೇ ರಾನು ಮಂಡಲ್ ಬಾಲಿವುಡ್ ನ ಜನಪ್ರೀಯ ಗಾಯಕಿಯಾದಳು. ತನ್ನ ಮಧುರ ಕಂಠದಿಂದ ಸಾಕಷ್ಟು ಹಿಂದಿ ಸಿನಿಮಾ ಹಾಡುಗಳನ್ನು ಹಾಡಿ ನಮಲ್ಲೂ ಪ್ರತಿಭೆ ಇದೆ ಎಂದು ತೋರಿಸಿದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ.

ಇನ್ನು ಕೈ-ಕಾಲು ಇಲ್ಲದವರು,  ವಯಸ್ಸಾದ ಮುದುಕರು, ಅವರ ಸುತ್ತಲೂ ಒಂದೆರಡು ಮಕ್ಕಳು,  ಆ ಮಕ್ಕಳ ಮೈ ಮೇಲಿನ ಬಟ್ಟೆ, ಆ ಮುಖದಲ್ಲಿ ಇರುವ ದುಗುಡ, ನಿರಾಸೆ ಇವೆಲ್ಲ ಮನಕಲಕುವ ಸಾಮಾನ್ಯ ದೃಶ್ಯಗಳು!  ನಾವು ಕೂಡ ಬೇರೆಯವರ ಮಕ್ಕಳಂತೆ ಇರಬೇಕು ಎಂಬ ಆಸೆ ಆ ಭಿಕ್ಷುಕರ ಮಕ್ಕಳ ಮನಸ್ಸಿನಲ್ಲಿ ಮೂಡುವುದಿಲ್ಲವೇ? ನಮ್ಮ ತಂದೆ ತಾಯಿ ಚೆನ್ನಾಗಿದ್ದರೆ  ನಾವು ಶಾಲೆಗೆ ಹೋಗಬಹುದಿತ್ತು, ನಾವು ಚೆನ್ನಾಗಿ  ಊಟ ಮಾಡಬಹುದಿತ್ತು ಎಂದು ಅನ್ನಿಸುತ್ತಿರಬಹುದಲ್ಲವೇ?

ನಮ್ಮ ನಿಮ್ಮ ಮಕ್ಕಳಿಗಿರುವ ಬಾಲ್ಯ ಆ ಮಕ್ಕಳಿಗೂ ಬೇಕಲ್ಲವೇ? ನಮ್ಮ ಮಕ್ಕಳಿಗೂ ಸಿಗುವ ತಾಯಿ-ತಂದೆ, ಬಂದು- ಬಳಗದ ವಾತ್ಸಲ್ಯ ಅವರಿಗೂ ಸಿಗವಂತಾಗಬೇಕು. ಅವರು ಓದಿ ಶಿಕ್ಷಣ ಪಡೆದು ಈ ದೇಶದ ಬುದ್ದಿಜೀವಿಗಳಾಗಬೇಕು. ಎಲ್ಲದಕ್ಕೂ ಮಿಗಿಲಾಗಿ ನಮಗೂ ಸಿಗುವ ಆಹಾರ ಅವರಿಗೂ ಸಿಗಬೇಕಲ್ಲವೇ?

ಇದು ಯಾರ ತಪ್ಪೋ ಅಥವಾ ಯಾರ ಶಾಪಹೋ ಅಥವಾ ದೇಶದ ದುಃಸ್ಥಿತಿಯೊ ಗೊತ್ತಿಲ್ಲ. ಏಕೆಂದರೇ ನಾವು ದೊಡ್ಡ ದೊಡ್ಡ ಗ್ಲೋಬಲೈಜೇಶನ್ ಬಗ್ಗೆ ಮಾತನಾಡುತ್ತೇವೆ.  ಆದರೆ ಲೋಕಲ್ ನಲ್ಲಿ ಇರುವ ಸಮಸ್ಯೆಗಳನ್ನು ಮರೆತಿದ್ದೇವೆ ಅನಿಸುತ್ತಿದೆ.

ಇದೆಲ್ಲವನ್ನು ನೋಡಿದಾಗ ನನಗೆ ಅನಿಸುವುದೇನೆಂದರೆ, ಎಲ್ಲಾಗಿದೆ ಸುಧಾರಣೆ? ಯಾಕೆ ನಿಂತಿಲ್ಲ ಇಂತಹ ಭಿಕ್ಷಾಟನೆ? ಎಂಬ ಹಲವು ಪ್ರಶ್ನೆಗಳು ಹುಟ್ಟುತ್ತವೆ. ನಾವು ಬಹಳ ದೊಡ್ಡದಾಗಿ ಜಂಬ ಕೊಚ್ಚಿಕೊಳ್ಳುತ್ತೇವೆ, ನಮ್ಮದು ಬಹುದೊಡ್ಡ ದೇಶ ಎಂದು. ಇಂತಹ ದೊಡ್ಡ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಬಹು ಕಷ್ಟ ಎನ್ನುತ್ತೇವೆ. ಆದರೆ, ಸಾಮಾನ್ಯರು ಕೇಳುವದು ಇಷ್ಟೇ,  ದೇಶ ದೊಡ್ಡದಿದ್ರೆ ವ್ಯವಸ್ತೆಯು ದೊಡ್ಡದಿರುತ್ತೆ ಅಲ್ವಾ?  ಆದರೆ, ಇದನ್ನು ಸರ್ಕಾರ ನಡೆಸುವಂತವರು, ನಮ್ಮ ಜನ ಪ್ರತಿನಿಧಿಗಳು ಯೋಚಿಸಬೇಕು. 

ನಮ್ಮ ಜನ ಪ್ರತಿನಿಧಿಗಳಿಗೆಲ್ಲ ವಿಲಕ್ಷಣವಾಗಿ ಪ್ರತಿಭಟಿಸುವ ಸಂಘಟನೆಗಳು ಬೇಕು, ಅವುಗಳು ಅವರ ವಿರುದ್ಧ ಪ್ರತಿಭಟನೆ ಮಾಡಬೇಕು, ಬಸ್ಸುಗಳಿಗೆ ಬೆಂಕಿ ಹಚ್ಚಬೇಕು,  ಆಗ ಮಾತ್ರ ಅವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವರು. ಈ ವ್ಯವಸ್ಥೆಯಲ್ಲಿ ನಮ್ಮ ಜನ ಪ್ರತಿನಿಧಿಗಳಲ್ಲಿ ಮುಕ್ಕಾಲು ಭಾಗ ‘ದಪ್ಪ ಚರ್ಮದವರು’.. ಪಾಪ ಈ ಬಡಪಾಯಿ ಭಿಕ್ಷುಕರುಗಳು ನಿಮ್ಮ ವಿರುದ್ಧ ಹೇಗೆ ಹೋರಾಟ ಮಾಡಲು ಸಾಧ್ಯ ಸ್ವಾಮಿ!  ಇವರುಗಳ ಕೈಯಿಂದ ಏನು ಮಾಡಲು ಸಾಧ್ಯ? ಇವರು ಇನ್ನೇನಿದ್ದರೂ ಅವರನ್ನು ಈ ಭೂಮಿ ಮೇಲೆ ಹುಟ್ಟಿಸಿದ ದೇವರಿಗೆ ಹಿಡಿ ಶಾಪ ಹಾಕಬೇಕು ಅಷ್ಟೇ! ಅವರು ಹಸಿವು.. ಹಸಿವು.. ಹಸಿವು.. ಅಂತ ದಿನಾಲೂ ಹಸಿವಿನ ಹೋರಾಟವನ್ನೇ ಮಾಡಬೇಕು. ಆದರೆ ಆ ರೋದನವನ್ನು ಯಾರೂ ಕಿವಿಗೆ ಹಾಕಿಕೊಳ್ಳುವುದಿಲ್ಲ, ಏಕೆಂದರೆ ನಮ್ಮದು “ಬಹುದೊಡ್ಡ ದೇಶ”! 

ಎಂತಹ ವಿಚಿತ್ರ ಎಂದರೆ, ನಮ್ಮ ಜನರೆಲ್ಲ ಗ್ಲೋಬಲ್ (ಜಾಗತೀಕರಣ) ಮಾತ್ರ ಬೇಗ ಅರ್ಥವಾಗುತ್ತೆ, ಆದರೆ ಲೋಕಲ್ ಇವರಿಗೆ ಅರ್ಥವೇ ಆಗೋದಿಲ್ಲ. ಪ್ರಜೆಗಳಿಗಾಗಿ ಇರುವ ಸರ್ಕಾರ, ಪ್ರಜೆಗಳು ಹಸಿವಿನಿಂದ ಸಾಯುತ್ತಿದ್ದರೂ ಇವರಿಗೆ ಅಂತವರ ಕೂಗು ಕೇಳಿಸಲ್ಲ. ಯಾಕೆ ಬೇಕು ಸ್ವಾಮಿ ಇಂತಹ ವ್ಯವಸ್ಥೆ?

ಐತಿಹಾಸಿಕವಾಗಿ ಅತ್ಯಂತ ಸುಭಿಕ್ಷವಾಗಿದ್ದ ನಮ್ಮ ದೇಶದ ಸಣ್ಣ ಸಣ್ಣ ಮಕ್ಕಳು ಈಗ ಭಿಕ್ಷೆಗೆ ಇಳಿದಿರುವುದು ಒಂದು ದುರಂತವೇ ಸರಿ.  ಒಂದು ಕಡೆ ಸರ್ಕಾರವೇ ಹೇಳುತ್ತೆ ಬಾಲಕರ್ಮಿಕರ ನಿರ್ಮೂಲನೆ ಮಾಡಬೇಕು ಎಂದು.  ಇದೆ ಕೆಲಸಕ್ಕೆ ಅಂತಾನೆ ಸರ್ಕಾರದಲ್ಲಿ ಒಂದು ಇಲಾಖೆಯೇ ಇದೆ.  ಇನ್ನೊಂದು ಕಹಿ ಸತ್ಯ ಏನೆಂದರೆ, ಅನಾಥ ಮಕ್ಕಳು ಅದೇ ಇಲಾಖೆಯ ಜನರಲ್ಲಿ ಭಿಕ್ಷೆ ಕೇಳಲು ಹೋದರೆ ಅವರಿಗೆ ಒಂದು ರೂಪಾಯಿ ದುಡ್ಡು ಕೊಟ್ಟು ಹೋಗುತ್ತಾರೆ! ಆ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ನಿಮ್ಮಿಂದ ಸಾಧ್ಯವಿಲ್ಲವೇ?  ಅವರಿಗೂ ಕೊಡ ಮೌಲ್ಯಯುತವಾಗಿ ಬದುಕುವ ಹಕ್ಕು ಇದೆ ಎಂದು ನಿಮಗೆ ಅನಿಸುವುದೇ ಇಲ್ಲವೇ? ಅವರು ಈ ದೇಶದಲ್ಲಿ ಹುಟ್ಟಿದ ತಪ್ಪಿಗೆ ಭಿಕ್ಷೆ ಬೇಡುತ್ತಲೇ ಬದುಕಿ, ಭಿಕ್ಷೆ ಬೇಡುತ್ತಲೇ ಸಾಯಬೇಕೆ?

ಈ ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ ಉಳಿದದ್ದು ಬಹುದೊಡ್ಡ ಸಮಸ್ಯೆಯಾಗಿದೆ. ಸಾಕಷ್ಟು ಜನ ಈ ದೇಶದಲ್ಲಿ ಹಸಿವಿನಿಂದ ಪರದಾಡಿ ಸಾಯುತ್ತಿದ್ದರೆ,  ಇನ್ನು  ಕೆಲವರು ತಾವು ಮಾಡಿದ ಊಟ ಅರಗಿಸಲು ಪರದಾಡುತ್ತಿದ್ದಾರೆ. ಇಂತಹ ವ್ಯತ್ಯಾಸವನ್ನು ಸರಿದೂಗಿಸಲು ಸರಿಯಾದ ಯೋಜನೆಗಳು ಈಗ ಅಗತ್ಯವಾಗಿ ಬೇಕಾಗಿವೆ. 
 
ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತಿವೆ ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಎಡವುತ್ತಿವೆ. ಪಾರದರ್ಶಕವಾಗಿ  ಫಲಾನುಭವಿಗಳಿಗೆ ಸರ್ಕಾರಗಳು ಸವಲತ್ತುಗಳನ್ನು ತಲುಪಿಸುವಂತಾಗಬೇಕು, ಯೋಜನೆಯ ದುಡ್ಡು ಸೋರಿಕೆಯಾಗದಂತೆ ಕಠಿಣವಾದ  ಕಾನೂನುಗಳನ್ನು ಜಾರಿಗೆ ತರಬೇಕು. ಅಂದಾಗ ಮಾತ್ರ ಇಂತಹ ಜ್ವಲಂತ ಸಮಸ್ಯೆಗಳನ್ನು  ಪರಿಹರಿಸಿಕೊಳ್ಳಲು  ಸಾಧ್ಯವಾಗುತ್ತದೆ.

ಭಿಕ್ಷಾಟನೆ ಒಂದು ಪಿಡುಗು ನಿಜ, ಆದರೆ ಭಿಕ್ಷುಕರು ನಮ್ಮ ದೇಶದ ಪಿಡುಗಾಗಬಾರದು. ಏಕೆಂದರೆ ಅವರೂ ಕೂಡ ನಮ್ಮ ನಿಮ್ಮಂತೆ ಬದುಕುವ ಹಕ್ಕು ಹೊಂದಿದ್ದಾರೆ. ಅವರೂ ಕೂಡ ಈ ದೇಶದ ಪ್ರಜೆಗಳೇ! ಆದ್ದರಿಂದ ಸರ್ಕಾರಗಳು, ಸಂಘ-ಸಂಸ್ಥೆಗಳು, ನಾವು-ನೀವೆಲ್ಲ ಸೇರಿ ಇವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು.



ಲೇಖಕರು:
ಶ್ರೀ ರಂಗನಾಥ ಮರ್ಕಲ್, ಶಿಕ್ಷಕರು 
ಮಹಾತ್ಮಾ ಗಾಂಧಿ ಪ್ರೌಢಶಾಲೆ, ಚಿತ್ತಾಪುರ
 {alertInfo}




ಗಮನಿಸಿ: ಈ ಲೇಖನದಲ್ಲಿರುವ ಅಭಿಪ್ರಾಯ/ಅನಿಸಿಕೆಗಳು ಲೇಖಕರದ್ದೇ ಆಗಿದೆ, 'ಇ-ಜ್ಞಾನ'ವು ಈ ಲೇಖನದಲ್ಲಿನ ಅನಿಸಿಕೆ/ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ.
Post a Comment (0)
Previous Post Next Post