BY FAKEHA TABASSUM
ಮಕ್ಕಳು ಚೆನ್ನಾಗಿ ಅಧ್ಯಯನ ಮಾಡುವುದಿಲ್ಲ ಎನ್ನುವುದು ಬಹುತೇಕ ತಾಯಿ-ತಂದೆ ಮತ್ತು ಅಧ್ಯಾಪಕರ ದೂರುತ್ತಾರೆ. ಮಕ್ಕಳು ಅಧ್ಯಯನ ಮಾಡುವುದಿಲ್ಲ ಎನ್ನುವಾಗ ನಿಜವಾಗಿ ಯಾರೂ ಕೂಡ ಅಧ್ಯಯನವನ್ನು ಗಮನದಲ್ಲಿ ಇಟ್ಟುಕೊಳ್ಳುವುದಿಲ್ಲ. ಬದಲು ಓದುವಿಕೆಯನ್ನು ಗಮನದಲ್ಲಿ ಇಟ್ಟಿರುತ್ತಾರೆ ವಾಸ್ತವವಾಗಿ ಓದುವಿಕೆ ಹಾಗೂ ಅಧ್ಯಯನಕ್ಕೆ ಬಹಳ ವ್ಯತ್ಯಾಸವಿದೆ.
ಅಧ್ಯಯನಕ್ಕೆ ಮತ್ತು ಓದುವಿಕೆಗೆ ಇರುವ ವ್ಯತ್ಯಾಸವೇನು?
ಓದು ಮತ್ತು ಅಧ್ಯಯನದ ನಡುವಿನ ಮುಖ್ಯವಾದ ವ್ಯತ್ಯಾಸ ಇಚ್ಛಾಶಕ್ತಿ ಗೆ ಸಂಬಂಧಿಸಿದೆ. ಓದುವಿಕೆಗೆ ಆಸಕ್ತಿ, ಕುತೂಹಲ, ತಿಳಿದುಕೊಳ್ಳುವ ಉದ್ದೇಶಗಳು ಕಾರಣ. ಓದಿನಿಂದ ಗಳಿಸಿದ ಅನುಭವದಿಂದ ಆಗುವ ಉಪಯೋಗವೂ ದೀರ್ಘಕಾಲ ಇರುತ್ತದೆ. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಉಪಯೋಗಕ್ಕೆ ಬರಬಹುದು. ಖಚಿತವಾಗಿ ಇಂಥದ್ದೇ ಉಪಯೋಗಕ್ಕೆ ಬರಬೇಕು, ಅದರಿಂದ ಸ್ಪಷ್ಟವಾಗಿ ಇಂಥದ್ದೇ ಆಗಬೇಕು ಎಂಬ ಖಚಿತತೆ ಇರುವುದಿಲ್ಲ.
ಆದರೆ ಅಧ್ಯಯನ ಎಂದರೆ ಹೀಗಲ್ಲ. ನಿರ್ದಿಷ್ಟವಾಗಿ ಖಚಿತ ಉದ್ದೇಶ ಸಾಧಿಸಲು ಅಧ್ಯಯನ ನಡೆಸಲಾಗುತ್ತದೆ. ಅಧ್ಯಯನ ಉಪಯೋಗವೂ ಅಲ್ಪ ಕಾಲಕ್ಕೆ ಸಶಕ್ತ ಆಗಿರುತ್ತದೆ. ಅಧ್ಯಯನದಲ್ಲಿ ತೊಡಗುವಾಗ ಫಲತಾಂಶದತ್ತ ಸ್ಪಷ್ಟ ನಿರೀಕ್ಷೆ ಇರುತ್ತದೆ.
ಓದು ಮತ್ತು ಅಧ್ಯಯನದ ವ್ಯತ್ಯಾಸ ಒಂದು ಉದಾಹರಣೆ ಮೂಲಕ ಹೇಳುವುದಾದರೆ ನೀವು ಒಂದು ಕಥೆ ಪುಸ್ತಕ ಓದುವುದು ಓದುವಿಕೆಯ ಉದಾಹರಣೆ ಆಗಿದೆ. ಶೈಕ್ಷಣಿಕ ಪರೀಕ್ಷೆಗಾಗಿ ಪಠ್ಯ ಪುಸ್ತಕ ಅಭ್ಯಾಸ ಮಾಡುವುದು ಅಧ್ಯಯನವಾಗಿದೆ.
ಓದು ಮತ್ತು ಅಧ್ಯಯನದ ಸ್ವರೂಪ
ಓದುವಿಕೆಯ ವ್ಯಾಪ್ತಿ ದೊಡ್ಡದು. ಯಾವತ್ತೂ ಓದಿ ತಿಳಿದುಕೊಂಡ ವಿಚಾರವೂ ಆಮೇಲೆ ನಾವು ನೆನಪು ಮಾಡಿಕೊಳ್ಳದೆ ಇದ್ದರೂ ಇನ್ಯಾವತ್ತೋ ನಮಗೆ ಗೊತ್ತಿಲ್ಲದ ಹಾಗೆ ಹಠಾತ್ತಾಗಿ ಉಪಯೋಗಕ್ಕೆ ಬರಬಹುದು. ಆದರೆ ವ್ಯಾಪ್ತಿ ದೊಡ್ಡದಾಗಿದ್ದರೂ ಓದುವಿಕೆಯೂ ನಿರಾಳ ಮನಸ್ಥಿತಿಯಲ್ಲಿ ಅಧ್ಯಯನಕ್ಕೆ ಹೋಲಿಸಿದರೆ ಲಘು ಎನಿಸುವ ರೀತಿಯಲ್ಲಿ ನಡೆಯುತ್ತದೆ.
ಮಾಹಿತಿ ಸಂಗ್ರಹಣೆಗಾಗಿ ಓದುವಾಗ, ಅನುಭವಗಳ ಸಲುವಾಗಿ ಓದುವಾಗ, ಓದಿನ ಖುಷಿಯನ್ನು ಪಡೆಯುವುದಕ್ಕೆ ಓದುವಾಗ ಹೇಗೆ ಓದನ್ನು ನಡೆಸಬೇಕು ಎಂಬುದಕ್ಕೆ ಬೇರೆ ಬೇರೆ ವಿಧಾನಗಳಿವೆ. ಇಲ್ಲಿ ಅಧ್ಯಯನದ ಬಗ್ಗೆ ತಿಳಿಯಲು ಹೊರಟಿರುವುದರಿಂದ ಓದಿನ ವಿಧಗಳ ಬಗ್ಗೆ ಹೇಳಲು ಹೋಗುವುದಿಲ್ಲ.
ಅಧ್ಯಯನವು ಓದುವಿಕೆಯನ್ನು ಒಳಗೊಂಡಿದೆ ಆದ್ರೂ ಇದರಲ್ಲಿ ಓದುವ ಕಾರ್ಯಕ್ಕಿಂತ ಓದಿನಿಂದ ಗಳಿಸುವ ಅನುಭವಕ್ಕಿಂತ ಓದಿನಿಂದ ಗಳಿಸಿದ್ದನು ಧೃಢೀಕರಿಸಿಕೊಳ್ಳುವ ಕಾರ್ಯಕ್ಕೆ ಹೆಚ್ಚು ಮಹತ್ವವಿದೆ. ಯಾಕೆಂದರೆ ಅಧ್ಯಯನದ ಉದ್ದೇಶವೂ ಅತ್ಯಂತ ಪ್ರಧಾನವಾಗಿ ಮರು ನಿರೂಪಣೆ ಆಗಿರುತ್ತದೆ.
ಮರು ನಿರೂಪಣೆ ಎಂದರೇನು?
ನೀವು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತೀರಿ. ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಅಧ್ಯಯನವನ್ನು ಪ್ರಾರಂಭ ಮಾಡುತ್ತೀರಿ. ಇಲ್ಲಿ ನೀವು ಅಧ್ಯಯನ ನಡೆಸುವ ಉದ್ದೇಶವೂ ಅಧ್ಯಯನ ನಡೆಸಿದ ವಿಚಾರಗಳನ್ನು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಮಂಡಿಸುವುದು ಆಗಿರುತ್ತದೆ. ಪರೀಕ್ಷೆಯಲ್ಲಿ ಉತ್ತರ ಬರೆಯಬೇಕು ಎನ್ನುವ ಪರಿಕಲ್ಪನೆಯೇ ಅಧ್ಯಯನದ ಮರು ನಿರೂಪಣೆ ಆಗಿರುತ್ತದೆ.
ಮರು ನಿರೂಪಣೆ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡರೆ ಅಧ್ಯಯನದ ಪ್ರಮುಖ ಸ್ವರೂಪ ಏನೆಂಬುದು ಗೊತ್ತಾಗುತ್ತದೆ. ಅದೇನೆಂದರೆ ಮರು ನಿರೂಪಣೆ ಅಗತ್ಯಕ್ಕೆ ತಕ್ಕ ಹಾಗೆ ಅಧ್ಯಯನ ನಡೆಸಬೇಕು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಅನುಕೂಲ ಆಗುವ ಹಾಗೆ ಕಲಿಕಾ ವಿಚಾರಗಳನ್ನು ತಿಳಿದುಕೊಳ್ಳುವುದು ಅಧ್ಯಯನದ ಮಹತ್ವದ ಸ್ವರೂಪ ಆಗಿದೆ.