ಆನ್‌ಲೈನ್ ಕಲಿಕೆಯೆಂದರೆ ಇಷ್ಟೇ ಅಲ್ಲ!

ನಾನು ಓದಿದ್ದು ಕೊಡಗಿನ ಶ್ರೀಮಂಗಲದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಮ್ಮ ಶಾಲೆಯ ದಾರಿಯಲ್ಲಿ, ಟೀಚರ್ ಮನೆಯ ಎದುರಿನಲ್ಲೇ, ಒಂದು ಬೃಹದಾಕಾರದ ಮರ ಇತ್ತು. ಚರಂಡಿಯ ಪಕ್ಕದಲ್ಲಿ ಇದ್ದುದರಿಂದಲೋ ಏನೋ ಅದರ ಒಂದು ಬದಿಯ ಬೇರುಗಳು ಹೊರಗೆ ಕಾಣಿಸುವಂತಿದ್ದವು. ಹಾಗಾಗಿ ಅದು ದುರ್ಬಲವಾಗಿರಬಹುದು ಎನ್ನುವುದು ನಮ್ಮ ಎಣಿಕೆ. ಮಳೆಗಾಲದಲ್ಲಿ ಗಾಳಿ-ಮಳೆಯ ಆರ್ಭಟ ಜೋರಾದಾಗಲೆಲ್ಲ ಆ ಮರ ಬಿದ್ದುಹೋಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೆವು. ಅಷ್ಟು ದೊಡ್ಡ ಮರ ರಸ್ತೆಗೆ ಅಡ್ಡಲಾಗಿ ಬಿದ್ದರೆ ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ, ಅದನ್ನು ತೆರವುಗೊಳಿಸುವವರೆಗೂ ಮನೆಯಲ್ಲೇ ಬೆಚ್ಚಗೆ ಆರಾಮವಾಗಿರಬಹುದು ಎನ್ನುವುದು ನಮ್ಮ ಲೆಕ್ಕಾಚಾರ. ಈ ಲೆಕ್ಕಾಚಾರ ಎಷ್ಟು ತಪ್ಪಾಗಿತ್ತು ಎಂದರೆ ನಮ್ಮ ಶಾಲಾ ವಿದ್ಯಾಭ್ಯಾಸವೆಲ್ಲ ಮುಗಿದು ಪದವಿ ತರಗತಿಗೆ ಸೇರಿಕೊಳ್ಳುವ ಸಮಯ ಬಂದಾಗಲೂ ಆ ಮರ ನಿಂತಲ್ಲೇ ಗಟ್ಟಿಯಾಗಿ ನಿಂತಿತ್ತು!


ಶಾಲೆಗೆ ಹೋಗುವ ಬದಲು ಮನೆಯಲ್ಲೇ ಇರುವ ಅವಕಾಶ ಅನಿರೀಕ್ಷಿತವಾಗಿ ಸಿಕ್ಕಿಬಿಟ್ಟರೆ ಎಷ್ಟು ಚೆಂದವೆಂದು ಮಕ್ಕಳು ಕನಸುಕಾಣುವುದು ಅಪರೂಪವೇನಲ್ಲ. ನಮ್ಮಂತಹ ಹಳೆಯ ಕಾಲದ ಮಕ್ಕಳಷ್ಟೇ ಅಲ್ಲ, ಇಂದಿನ ಮಾಡರ್ನ್ ಮಕ್ಕಳೂ ಹೀಗೆಯೇ ಕನಸು ಕಾಣುತ್ತಿದ್ದಿರಬೇಕು - ಕಳೆದ ವರ್ಷದವರೆಗೆ! ಆದರೆ ಆ ಕನಸು ಈ ಪರಿ ನನಸಾಗಬಹುದೆಂದು ಯಾರೂ ಎಣಿಸಿರಲಿಕ್ಕಿಲ್ಲ. ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ಬಲವಂತದ ಮನೆವಾಸ ಅನುಭವಿಸಿದ ಮಕ್ಕಳು, ಶಾಲೆಗಳ ಪುನರಾರಂಭದ ಸುದ್ದಿ ಕೇಳಿ ಖುಷಿಯಾಗಿದ್ದಾರೆ. ರಜೆ ಮುಗಿಸಿ ಶಾಲೆಗೆ ಮರಳುವುದು ಮಕ್ಕಳಿಗೆ ಇಷ್ಟವೇ ಇರುವುದಿಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯಕ್ಕೆ ವಿರುದ್ಧವಾಗಿ, ಶಾಲೆ ಯಾವಾಗ ಶುರುವಾಗುತ್ತದೋ, ಸಹಪಾಠಿಗಳನ್ನು ಯಾವಾಗ ಭೇಟಿಮಾಡುತ್ತೇವೋ ಎಂದು ಕಾತರದಿಂದ ಕಾಯುತ್ತಿದ್ದಾರೆ. ಗ್ಯಾಜೆಟ್‌ಗಳ ಪರದೆಯ ಬದಲು ಕರಿಹಲಗೆಯನ್ನು ನೋಡುವ ಅವಕಾಶ ಮತ್ತೆ ಸಿಗುತ್ತಿದೆಯೆಂದು ಸಂತೋಷಪಡುತ್ತಿದ್ದಾರೆ.

ಶಾಲೆಯ ಮಕ್ಕಳಿಗೆ ದಿಢೀರನೆ ಪರಿಚಯವಾದ ಆನ್‌ಲೈನ್ ತರಗತಿಗಳು ಅವರ ಶಿಕ್ಷಣದ ಮುಂದುವರಿಕೆಯಲ್ಲಿ ಸಹಾಯ ಮಾಡಿದ್ದು ನಿಜ. ಆದರೆ ಅವು ಇದುವರೆಗೂ ಭೌತಿಕ ತರಗತಿಗಳಿಗೆ ಪರ್ಯಾಯವಾಗಿ ಬೆಳೆದಿಲ್ಲ. ಅದು ಸುಲಭವೂ ಅಲ್ಲವೆನ್ನಿ. ಶಾಲೆಯ ವಾತಾವರಣವನ್ನೂ ಸಹಪಾಠಿಗಳ ಒಡನಾಟವನ್ನೂ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆ ಅದೆಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲದು? ಹಾಗೆಯೇ, ಗ್ಯಾಜೆಟ್‌ಗಳನ್ನೂ ಅಂತರಜಾಲ ಸಂಪರ್ಕವನ್ನೂ ಸುಲಭಕ್ಕೆ ಪಡೆಯಲಾರದ ಮಕ್ಕಳ ಪಾಲಿಗೂ ಭೌತಿಕ ತರಗತಿಗಳು ನೆಮ್ಮದಿ ತರಬಲ್ಲವು.

ಆದರೆ, ಕಳೆದೊಂದು ವರ್ಷದ ಅನುಭವದಲ್ಲಿ ನಮಗೆಲ್ಲ ಅನ್ನಿಸಿರುವ ಹಾಗೆ, ಆನ್‌ಲೈನ್ ಕಲಿಕೆಯೆನ್ನುವುದು ಗೂಗಲ್ ಮೀಟ್‌ನಲ್ಲಿ ಪಾಠಮಾಡುವುದಕ್ಕಷ್ಟೇ ಸೀಮಿತವಲ್ಲ. ಶಾಲೆಗಳ ಪುನರಾರಂಭ ಆಗುತ್ತಿದ್ದಂತೆಯೇ ಆನ್‌ಲೈನ್ ಕಲಿಕೆ ನಿಂತುಹೋಗುವುದೂ ಇಲ್ಲ. ಈ ಪರಿಕಲ್ಪನೆ ಹಲವು ವರ್ಷಗಳಿಂದಲೇ ಅಸ್ತಿತ್ವದಲ್ಲಿತ್ತಾದರೂ ಸದ್ಯದ ಕೋವಿಡ್ ಜಾಗತಿಕ ಸೋಂಕು ನಮಗೆ ಅದರ ವಿವಿಧ ಸಾಧ್ಯತೆಗಳನ್ನು ಪರಿಚಯಿಸಿದೆ, ಶಿಕ್ಷಣದ ವಿವಿಧ ಹಂತಗಳಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಎಷ್ಟೆಲ್ಲ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೆಂದು ತೋರಿಸಿಕೊಟ್ಟಿದೆ. ನಾವೆಲ್ಲ ನೋಡಿರುವ ಚಿಕ್ಕಮಕ್ಕಳ ಆನ್‌ಲೈನ್ ಕ್ಲಾಸು, ಈ ಸಾಧ್ಯತೆಗಳ ಒಂದು ಭಾಗ ಮಾತ್ರ. ಪ್ಲೇಹೋಮಿನ ಚಿಣ್ಣರ ಶಿಕ್ಷಣ ಮುಂದುವರಿಸಲು ಸಹಾಯ ಮಾಡಿದ ಆನ್‌ಲೈನ್ ಕಲಿಕೆಯ ಪರಿಕಲ್ಪನೆ ಸ್ನಾತಕೋತ್ತರ ಪದವೀಧರರಿಗೂ ತಮ್ಮ ಕೌಶಲವನ್ನು ಬೆಳೆಸಿಕೊಳ್ಳಲು ನೆರವಾಗಬಲ್ಲದು.

ಆನ್‌ಲೈನ್ ಕಲಿಕೆಯ ಕ್ಷೇತ್ರದಲ್ಲಿ ಭಾರತ ಪ್ರಪಂಚದ ಎರಡನೆಯ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಇದು ಇನ್ನೂ ಐದಾರುಪಟ್ಟು ದೊಡ್ಡದಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್‌ ಹೇಳಿದೆ. ನಮ್ಮ ದೇಶದ ಶೈಕ್ಷಣಿಕ ತಂತ್ರಜ್ಞಾನ (ಎಡ್-ಟೆಕ್) ಕ್ಷೇತ್ರ ಗಮನಾರ್ಹ ಬೆಳವಣಿಗೆ ಸಾಧಿಸಿರುವುದು ಹಾಗೂ ದೇಶದ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ತಮ್ಮ ಕೋರ್ಸ್‌ಗಳನ್ನು ಆನ್‌ಲೈನ್ ಮಾಧ್ಯಮದ ಮೂಲಕ ಲಭ್ಯವಾಗಿಸುತ್ತಿರುವುದು ಈ ಬೆಳವಣಿಗೆಗೆ ಪೂರಕವೇ ಆಗಿದೆ. ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಮೈಸೂರಿನಲ್ಲಿ ಕುಳಿತು ಜಮ್‌ಷೆಡ್‌ಪುರದ ವಿದ್ಯಾಸಂಸ್ಥೆ ನಡೆಸುವ ತರಗತಿಗಳಿಗೆ ಹಾಜರಾಗಲು, ದೇಶದೆಲ್ಲೆಡೆಯ ಸಹಪಾಠಿಗಳೊಡನೆ ವಿಚಾರ ವಿನಿಮಯ ನಡೆಸಲು ಅನುವುಮಾಡಿಕೊಟ್ಟಿರುವುದು ಆನ್‌ಲೈನ್ ಕಲಿಕೆಯದೇ ಹೆಚ್ಚುಗಾರಿಕೆ. ನಮಗೆಲ್ಲ ಪರಿಚಯವಿರುವ ದೂರಶಿಕ್ಷಣದ ಪರಿಕಲ್ಪನೆಯನ್ನು ಇದು ಆನ್‌ಲೈನ್ ಜಗತ್ತಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಿದೆ. ನಮ್ಮ ದೇಶದ ವಿದ್ಯಾಸಂಸ್ಥೆಗಳಷ್ಟೇ ಅಲ್ಲದೆ ಹೊರದೇಶಗಳ ಹಲವು ವಿಶ್ವವಿದ್ಯಾನಿಲಯಗಳು ನಡೆಸುವ ಕೋರ್ಸುಗಳಿಗೂ ನಾವು ಮನೆಯಿಂದಲೇ ಸೇರಿಕೊಳ್ಳಬಹುದು.

ಓಪನ್ ಆಂಡ್ ಡಿಸ್ಟೆನ್ಸ್ ಲರ್ನಿಂಗ್ (ODL) ಎಂಬ ಹೆಸರಿನ, ದೂರಶಿಕ್ಷಣದ ಈ ಆನ್‌ಲೈನ್ ಅವತಾರವು ಕಲಿಕೆಯ ಭೌಗೋಳಿಕ ಮಿತಿಗಳನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ. ಆದರೆ ಅಂತಹ ಕೋರ್ಸಿನ ವಿದ್ಯಾರ್ಥಿಗಳು ನಿರ್ದಿಷ್ಟ ಸಮಯದಲ್ಲೇ ತರಗತಿಗಳಿಗೆ ಹಾಜರಾಗಬೇಕಾದ ಅನಿವಾರ್ಯತೆ ಇನ್ನೂ ಇದೆ. ಈ ಸಮಸ್ಯೆಯನ್ನೂ ದೂರಮಾಡುವ ಪ್ರಯತ್ನವೇ MOOC, ಅಂದರೆ 'ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್‌ (MOOC)'ಗಳ ಪರಿಕಲ್ಪನೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಒದಗಿಸುವುದು ಈ ಪರಿಕಲ್ಪನೆಯ ಉದ್ದೇಶ. ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಲಭ್ಯವಿರುವುದು, ಮತ್ತು ಯಾರು ಎಲ್ಲಿಂದ ಬೇಕಾದರೂ ಸೇರಲು ಸಾಧ್ಯವಿರುವುದು ಈ ಕೋರ್ಸ್‌ಗಳ ವೈಶಿಷ್ಟ್ಯ. ಪಾಠದ ವೀಡಿಯೊಗಳು, ಬಹುಮಾಧ್ಯಮ ಪ್ರಸ್ತುತಿಗಳು, ಓದಿಕೊಳ್ಳಲು ಪೂರಕ ಸಾಮಗ್ರಿ, ಪಾಠ ಹಾಗೂ ಕೋರ್ಸಿನ ಕೊನೆಗೆ ಪರೀಕ್ಷೆ - ಹೀಗೆ ವಿವಿಧ ಅಂಶಗಳು ಇಂತಹ ಕೋರ್ಸ್‌ಗಳಲ್ಲಿ ಇರುವುದು ಸಾಧ್ಯ. ಸಾಮಾನ್ಯವಾಗಿ ಇವುಗಳನ್ನು ವಿಶ್ವವಿದ್ಯಾನಿಲಯಗಳು, ಸರಕಾರಗಳು, ಹಾಗೂ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತವೆ. 'ಸ್ವಯಂ' ಎನ್ನುವುದು ಭಾರತ ಸರಕಾರದ ಶಿಕ್ಷಣ ಇಲಾಖೆ ರೂಪಿಸಿರುವ MOOC ವೇದಿಕೆ.

ಸ್ಥಳ ಹಾಗೂ ಸಮಯ ಮಾತ್ರವೇ ಅಲ್ಲ, ಈ ಕೋರ್ಸ್‌ಗಳಿಗೆ ಭಾಷೆ ಹಾಗೂ ವಿಷಯದ ಮಿತಿಯೂ ಇಲ್ಲ - ಕಂಪ್ಯೂಟರ್ ವಿಜ್ಞಾನ, ಇಂಜಿನಿಯರಿಂಗ್, ವಾಣಿಜ್ಯ ಅಧ್ಯಯನ, ನಿರ್ವಹಣೆ, ಸಂವಹನ, ಜೀವವಿಜ್ಞಾನ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ MOOCಗಳು ಪ್ರಪಂಚದ ಹಲವು ಭಾಷೆಗಳಲ್ಲಿ ಲಭ್ಯವಿವೆ. 'ಸ್ವಯಂ' ವೇದಿಕೆಯಲ್ಲಿರುವ ಮಾಹಿತಿಯಲ್ಲಿ ಒಂದಷ್ಟು ಕನ್ನಡದಲ್ಲೂ ಇದೆ.

ಇಂತಹ ಕೋರ್ಸ್‌ಗಳು ಉಚಿತವಾಗಿರಬೇಕು ಎಂದು MOOC ಪರಿಕಲ್ಪನೆ ಹೇಳುತ್ತದೆಯಾದರೂ, ಕೊಂಚ ಬದಲಾವಣೆಯ ಜೊತೆ ಅದನ್ನು ಅಳವಡಿಸಿಕೊಂಡಿರುವ ವಾಣಿಜ್ಯ ಸಂಸ್ಥೆಗಳೂ ಇವೆ. ಅಂತಹ ಸಂಸ್ಥೆಗಳು ಕೋರ್ಸ್‌ಗಾಗಿ ಇಂತಿಷ್ಟು ಶುಲ್ಕ ನಿಗದಿಪಡಿಸಿರುತ್ತವೆ ಅಥವಾ ಪರೀಕ್ಷೆ ಪಾಸುಮಾಡಿದ ಪ್ರಮಾಣಪತ್ರ ಬೇಕು ಎಂದರೆ ಮಾತ್ರ ಶುಲ್ಕವನ್ನು ಅಪೇಕ್ಷಿಸುತ್ತವೆ. ಇಲ್ಲಿನ ಕೋರ್ಸ್‌ಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ನಮ್ಮ ಪರಿಣತಿಯ ವಿಷಯವನ್ನು ಇತರರಿಗೆ ಬೋಧಿಸುವ, ಅವರಿಂದ ಶುಲ್ಕ ಪಡೆಯುವ ಅವಕಾಶ ಕೂಡ ನಮಗೆ ಸಿಗುತ್ತದೆ. ಇಂತಹ ವೇದಿಕೆಗಳಲ್ಲಿ ಪರೀಕ್ಷಾ ಸಿದ್ಧತೆ, ಭಾಷಾ ಕಲಿಕೆ, ಪ್ರೋಗ್ರಾಮಿಂಗ್ ಅಭ್ಯಾಸ, ಹವ್ಯಾಸಗಳ ಅಭಿವೃದ್ಧಿ ಮುಂತಾದ ಹಲವು ವಿಷಯಗಳನ್ನು ಬೋಧಿಸುತ್ತಿರುವ ಅನೇಕರು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದಾರೆ.

ಸಂಪೂರ್ಣ ಕೋರ್ಸ್‌ಗಳಷ್ಟೇ ಅಲ್ಲದೆ ವಿವಿಧ ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸಲು ಬಳಸುವ ಪಠ್ಯಸಾಮಗ್ರಿಯನ್ನೂ ನಾವು ವಿಶ್ವವ್ಯಾಪಿ ಜಾಲದಲ್ಲಿ ಮುಕ್ತವಾಗಿ ಪಡೆದುಕೊಳ್ಳಬಹುದು. ಇದಕ್ಕೆ ಓಪನ್ ಕೋರ್ಸ್‍ವೇರ್ (OCW) ಎಂಬ ಹೆಸರಿದೆ. ಅಮೆರಿಕಾದ ಎಂಐಟಿ, ಪ್ರಿನ್ಸ್‌ಟನ್, ಸ್ಟಾನ್‌ಫರ್ಡ್ ಸೇರಿದಂತೆ ಜಗತ್ತಿನ ಹಲವು ಪ್ರಮುಖ ಶಿಕ್ಷಣಸಂಸ್ಥೆಗಳು ವಿವಿಧ ಜಾಲತಾಣಗಳ ಮೂಲಕ ತಮ್ಮ ಪಠ್ಯಸಾಮಗ್ರಿಯನ್ನು ಹೀಗೆ ಹಂಚಿಕೊಳ್ಳುತ್ತಿವೆ. ಈ ಪಠ್ಯಸಾಮಗ್ರಿಯ ಓದು, ವಿಶ್ವದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ನಮ್ಮ ಅಧ್ಯಯನದ ವಿಷಯವನ್ನು ಹೇಗೆ ಬೋಧಿಸಲಾಗುತ್ತಿದೆ ಎನ್ನುವುದನ್ನು ತಿಳಿಯಲು ಇತರೆಡೆಯ ವಿದ್ಯಾರ್ಥಿಗಳಿಗೆ ನೆರವಾಗಬಲ್ಲದು.

ಇದು, ಮತ್ತು ಕಲಿಕೆಗಾಗಿ ಮುಕ್ತವಾಗಿ ಬಳಸಬಹುದಾದ ಇಂತಹವೇ ಇನ್ನಿತರ ಸಂಪನ್ಮೂಲಗಳನ್ನು ಒಟ್ಟಾಗಿ ಓಪನ್ ಎಜುಕೇಶನಲ್ ರಿಸೋರ್ಸಸ್ (OER) ಎಂದು ಕರೆಯುತ್ತಾರೆ. ಇಂತಹ ಎಲ್ಲ ಸಂಪನ್ಮೂಲಗಳನ್ನೂ ಯಾವುದೇ ಶುಲ್ಕ ಅಥವಾ ನಿರ್ಬಂಧವಿಲ್ಲದೆ ಬಳಸುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಸಾಧ್ಯ. ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ಹಾಗೂ ಅರಿವನ್ನು ಹಂಚಿಕೊಳ್ಳಲು ಅತ್ಯುತ್ತಮ ಅವಕಾಶ ಒದಗಿಸುತ್ತವೆ ಎಂದು ಯುನೆಸ್ಕೋ ಹೇಳಿದೆ. ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಎಲ್ಲರಿಗೂ ದೊರೆತರೆ ಅದು ಸುಸ್ಥಿರ ಸಾಮಾಜಿಕ - ಆರ್ಥಿಕ ಅಭಿವೃದ್ಧಿ ಹಾಗೂ ಜಾಗತಿಕ ಶಾಂತಿಗೆ ಕೊಡುಗೆ ನೀಡುತ್ತದೆ ಎನ್ನುವುದು ಯುನೆಸ್ಕೋ ಆಶಯ. ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿ ಆನ್‌ಲೈನ್ ಕಲಿಕೆಯತ್ತ ಬಂದವರಿಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ನೆರವು ನೀಡಲು ಪ್ರಾರಂಭವಾದ #OER4Covid ಅಭಿಯಾನವನ್ನೂ ಅದು ಬೆಂಬಲಿಸಿದೆ. ಮುಕ್ತಜ್ಞಾನದ ಪರಿಕಲ್ಪನೆಯಡಿ 'ಓಪನ್ ಲರ್ನಿಂಗ್ ಕ್ಯಾಂಪಸ್'ನಲ್ಲಿ ತನ್ನ ಪ್ರಕಟಣೆಗಳನ್ನು ಮುಕ್ತವಾಗಿ ತೆರೆದಿಟ್ಟಿರುವ ವಿಶ್ವಬ್ಯಾಂಕ್ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿರುವುದು ವಿಶೇಷ.

ನಾವು ಮೊನ್ನೆಯಷ್ಟೇ ಶಿಕ್ಷಕರ ದಿನ ಆಚರಿಸಿದ್ದೇವೆ. ನಾಳೆ, ಸೆಪ್ಟೆಂಬರ್ ೮, ಅಂತಾರಾಷ್ಟ್ರೀಯ ಸಾಕ್ಷರತಾ ದಿನ. ಇಡೀ ಜಗತ್ತು ಕೋವಿಡ್ ಜಾಗತಿಕ ಸೋಂಕಿನಿಂದ ತತ್ತರಿಸಿರುವ ಹೊತ್ತಿನಲ್ಲಿ, ಈ ಬಾರಿಯ ಸಾಕ್ಷರತಾ ದಿನದ ಕೇಂದ್ರ ವಿಷಯ ಚೇತರಿಕೆಯ ಹಾದಿಯಲ್ಲಿ ಸಾಕ್ಷರತೆಯ ಮಹತ್ವವನ್ನು ಕುರಿತಾಗಿಯೇ ಇರಲಿದೆ. ಡಿಜಿಟಲ್ ಕೌಶಲಗಳು ಜಗತ್ತಿನ ಎಲ್ಲರಿಗೂ ಅಗತ್ಯವೆನಿಸಿರುವ ಹಾಗೆಯೇ, ಮಾಹಿತಿ ತಂತ್ರಜ್ಞಾನವನ್ನು ಆಧರಿಸಿದ ಕಲಿಕೆ ಎಲ್ಲರನ್ನೂ ಒಳಗೊಳ್ಳಬೇಕಾದ್ದೂ ಇಂದಿನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಆಲೋಚಿಸಲು, ತಂತ್ರಜ್ಞಾನದ ಸಹಾಯ ಪಡೆದು ಭವಿಷ್ಯದ ಬೋಧನೆ ಹಾಗೂ ಕಲಿಕೆಯನ್ನು ಮರುರೂಪಿಸಲು ಇದು ನಿಜಕ್ಕೂ ಸರಿಯಾದ ಸಮಯ.

Source: ejnana[dot]com

ಲೇಖಕರು:
ಟಿ. ಜಿ. ಶ್ರೀನಿಧಿ

ಸೆಪ್ಟೆಂಬರ್ ೭, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಮೂರನೇ ಬರಹ.

Post a Comment (0)
Previous Post Next Post