ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ತಮ್ಮ ಗುರಿ ನಿರ್ಧರಿಸುವುದು ಹೇಗೆ?

9ನೇ ತರಗತಿಯಿಂದ ತೇರ್ಗಡೆ ಹೊಂದಿ 10ನೇ ತರಗತಿಗೆ ಬಂದಿದ್ದೀರಿ. ಅಂದರೆ ನೀವು ಈಗ 16ನೇ ವರ್ಷಕ್ಕೆ ಕಾಲಿಟ್ಟಿದ್ದೀರಿ. ಎನ್ನುವುದು ನಿಮಗೆ ತಿಳಿದಿರಬೇಕಾದ ವಿಚಾರ.

ನಿಮ್ಮ ವಯಸ್ಸು16 ಅಂದರೆ ನಿಮಗೆ ಸ್ವತ: ಆಲೋಚನೆ ಮಾಡುವ ಬುದ್ಧಿಮಟ್ಟ ಬಂದಿರುತ್ತದೆ. ಇಲ್ಲಿ ತಿಳಿಸಿದ ವಿಷಯವನ್ನು ಯಾರೂ ಇಲ್ಲದ ಸ್ಥಳದಲ್ಲಿ ಏಕಾಂತವಾಗಿ ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.


ಗುರಿ ನಿರ್ಧರಿಸುವುದು ಹೇಗೆ?

ನೀವು ಜೀವನದಲ್ಲಿ ಏನಾಗಬೇಕು ಎನ್ನುವುದನ್ನು ಆಲೋಚನೆ ಮಾಡಿ, ಉತ್ತಮವಾದ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಂತರ ನಿಮ್ಮ ಹಿರಿಯರೊಂದಿಗೆ ಚರ್ಚೆ ಮಾಡಿ ಮತ್ತು ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ತಿಳಿದುಕೊಂಡು, ಅದೇ ವಿಷಯಕ್ಕೆ ಸಂಬಂಧಪಟ್ಟ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ. ಪ್ರತಿ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ಹುದ್ದೆಗಳು ಇರುತ್ತವೆ. ಇದರಲ್ಲಿ ಏನಾಗಬೇಕು ಮತ್ತು ಏನಾದರೆ ಸಮಾಜದಲ್ಲಿ ಉತ್ತಮ ಗೌರವ ಸಿಗುತ್ತದೆ ಎನ್ನುವುದನ್ನು ತಿಳಿದುಕೊಂಡು, ಆ ಹುದ್ದೆಯನ್ನು ಗುರಿಯಾಗಿ ಇಟ್ಟುಕೊಳ್ಳಬೇಕು. 

You might like: ಎಲ್ಲಾ ವಿಷಯಗಳ ಉಚಿತ SSLC ಅಧ್ಯಯನ ಸಾಮಗ್ರಿ

ನಂತರ ಒಂದು ಡ್ರಾಯಿಂಗ್ ಶೀಟ್‌ನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಗುರಿಯನ್ನು ಬರೆದು ನೀವು ಮಲಗುವ ಕೋಣೆಯಲ್ಲಿ ನೇತುಹಾಕಿ, ದಿನನಿತ್ಯ ನೀವು ಏದ್ದೇಳುವ ಮತ್ತು ಮಲಗುವ ಸಮಯದಲ್ಲಿ ಅದು ನಿಮ್ಮ ಕಣ್ಣಿಗೆ ಕಾಣುವಂತೆ ಇರಬೇಕು. ನೀವು ನಿಮ್ಮ ಗುರಿಯನ್ನು 100% ಸಾಧನೆ ಮಾಡಬೇಕಾದರೆ, ಮೊದಲು ಒಂದು ದೃಢ ನಿರ್ಧಾರ ಮಾಡಬೇಕು. ಈಗ ನಾನು 10ನೇ ತರಗತಿ ಓದುತ್ತಿದ್ದೇನೆ. ಇದರಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತೇನೆ ಎನ್ನುವ ನಿರ್ಧಾರವನ್ನು ಮಾಡಬೇಕು.

ಮನೆಯ ಸದಸ್ಯರ ಜೊತೆ ನಿಮ್ಮ ಗುರಿಯ ಬಗ್ಗೆ ಚರ್ಚಿಸುವುದು:

ನಿಮ್ಮ ಗುರಿಯನ್ನು ನಿರ್ಧಾರ ಮಾಡಿದ ಮೇಲೆ, ಮೊದಲು ಮನೆಯಲ್ಲಿರುವ ನಿಮ್ಮ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿಯರಿಗೆ ತಿಳಿಸಬೇಕು. ನಾನು ಈ ವರ್ಷ 10ನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿ ಬರುತ್ತೇನೆ ಎಂದು ನಿರ್ಧಾರ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರ ನನಗೆ ಬೇಕು. ನೀವು ಸಹಕಾರ ನೀಡಿದರೆ, ನಾನು 100% ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತೇನೆ ಎಂದು ಅವರಿಗೆ ತಿಳಿಸಿ ಹೇಳಬೇಕು. ಈ ಸಂದರ್ಭದಲ್ಲಿ ನಿಮ್ಮ ಮನೆಯವರು ನಿಮ್ಮನ್ನು ನಿರ್ಲಕ್ಷಿಸಬಹುದು. ಇಂಥಹ ಸಮಯದಲ್ಲಿ ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳದೇ ತಾಳ್ಮೆಯಿಂದ ನಿಮ್ಮ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಆಗ ನಿಮ್ಮ ಮನೆಯವರಿಗೆ ನಂಬಿಕೆ ಬರುತ್ತದೆ. ನೀವು ಕೇಳಿದ ಸಹಾಯಕ್ಕೆ ಅವರು ಬೆಂಬಲ ನೀಡುತ್ತಾರೆ.

ಗುರಿ ನಿರ್ಧರಿಸುವ 5 ಸೂತ್ರಗಳು:

ಗುರಿಯನ್ನು ಪೂರ್ವಯೋಜಿತವಾಗಿ, ನಿಖರವಾಗಿ, ಖಚಿತವಾಗಿ, ನಿಷ್ಕೃಷ್ಟತೆಯಿಂದ ಪ್ರಾರಂಭಿಸಬೇಕು. ಅಂದರೆ ಗುರಿಯನ್ನು ದಿನನಿತ್ಯ ನಿಮ್ಮ ಮೆದುಳಿಗೆ ಪುನರಾವರ್ತಿಸಬೇಕು. ಮಾನಸಿಕ ಚಿತ್ರಗಳನ್ನು ರಚಿಸಬೇಕು ಹಾಗೂ ಅಂಕಿ ಅಂಶಗಳ ಮೂಲಕ ಇಷ್ಟು ದಿನ ಇಷ್ಟು ತಿಂಗಳಲ್ಲಿ ನಾನು ಈ ವಿಷಯವನ್ನು ಪೂರ್ತಿಯಾಗಿ ಮುಗಿಸುತ್ತೇನೆ ಎನ್ನುವದನ್ನು ಸ್ಪಷ್ಟತೆ ಮಾಡಿಕೊಳ್ಳಬೇಕು ಮತ್ತು ಅದರಂತೆ ಶ್ರಮಪಡಬೇಕು.

ನಾವು ಯಾವುದೇ ಗುರಿಯನ್ನು ನಿರ್ಧಾರ ಮಾಡುವ ಮುಂಚೆ ಈ ಐದು ಸೂತ್ರಗಳ ಗಮನವಿರಲಿ:

1) ನಿರ್ದಿಷ್ಟವಾಗಿರಬೇಕು.
2) ಅಳತೆ ಮಾಡುವಂತೆ ಇರಬೇಕು.
3) ಸಾಧಿಸುವಂತಿರಬೇಕು.
4) ಸತ್ಯವಾಗಿರಬೇಕು.
5) ಸಮಯದ ಚೌಕಟ್ಟಿನಲ್ಲಿರಬೇಕು.

ಈ ಸೂತ್ರಗಳನ್ನು ಒಳಗೊಂಡಂತೆ ನಮ್ಮ ಗುರಿಯನ್ನು ನಿರ್ಧರಿಸಬೇಕು. ಏಕೆಂದರೆ ನಮ್ಮಲ್ಲಿರುವ ಇನ್ನೂ ಕೆಲವರು ವಕ್ರವಾಗಿ ಆಲೋಚನೆ ಮಾಡುತ್ತಾರೆ. ನಾವು ಮನಸ್ಸು ಮಾಡಿದರೆ ಎಲ್ಲವನ್ನು ಸಾಧನೆ ಮಾಡಬಹುದು ಎನ್ನುವ ಆಲೋಚನೆಯಲ್ಲಿ ಆಕಾಶಕ್ಕೆ ಏಣಿಯನ್ನು ರೂಪಿಸಬೇಕು. ಸೂರ್ಯನನ್ನು ಮುಟ್ಟಬೇಕು, ಮತ್ತು ನಕ್ಷತ್ರಗಳನ್ನು ಎಣಿಸಿ ಗಿನ್ನಿಸ್ ದಾಖಲೆ ಮಾಡಬೇಕು ಎಂಬಂತಹ ಅಸಾಧ್ಯವಾದ ಮತ್ತು ಅರ್ಥವಿಲ್ಲದ ಗುರಿಗಳನ್ನು ಇಟ್ಟುಕೊಳ್ಳಬಾರದು.

ನಾವು ನಿರ್ಧಾರ ಮಾಡುವ ಗುರಿಯಲ್ಲಿ ಸ್ಪಷ್ಟತೆ ಮತ್ತು ನಿಖರತೆ ಇರಬೇಕು. ನಮ್ಮ ಗುರಿಗಳೇ ನಮಗೆ ದಾರಿ ತೋರಿಸುವಂತೆ ಇರಬೇಕು. ಸಾಧಿಸಲು ಕೈಗೆ ನಿಲುಕುವ ಅಳತೆಯಲ್ಲಿ ಇರಬೇಕು, ನೈಜವಾಗಿರಬೇಕು, ಸಮಯವನ್ನು ಹಾಕಿಕೊಂಡು ಆ ಸಮಯದಲ್ಲಿ ಸಾಧಿಸುವ ಪ್ರಯತ್ನದಲ್ಲಿ ಶ್ರಮ ಪಡಬೇಕು.

ಮನಸ್ಸಿನ ಋಣಾತ್ಮಕತೆಯನ್ನು ತೆಗೆದು ಹಾಕುವುದು:

ಸಾಧಿಸುವ ಪ್ರಯತ್ನದಲ್ಲಿ ಶ್ರಮ ಪಡಬೇಕು. ಕೆಲವರಲ್ಲಿ ಇನ್ನೂ ಕೆಲವು ಗೊಂದಲಗಳು ಕಾಡುತ್ತಿರುತ್ತವೆ. ನಮ್ಮ ಮನೆಯಲ್ಲಿ ಸಹಕಾರ ನೀಡುವುದಿಲ್ಲ, ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ, ನಮ್ಮ ಶಾಲೆಯಲ್ಲಿ ಶಿಕ್ಷಕರು ಇಲ್ಲ ಮತ್ತು ಸರಿಯಾಗಿ ಪಾಠ ಮಾಡುವುದಿಲ್ಲ, ಟ್ಯೂಷನ್‌ಗೆ ಹೊಗುತ್ತಿಲ್ಲ. ನಮ್ಮ ಮನೆಯಲ್ಲಿ ತುಂಬಾ ಕೆಲಸಗಳು, ಓದುವುದಕ್ಕೆ ಸಮಯವಿಲ್ಲ, ಹೊಲ-ಗದ್ದೆಗಳಿಗೆ ಕಳುಹಿಸುತ್ತಾರೆ. ಇನ್ನೂ ಹಲವಾರು ಸಮಸ್ಯೆಗಳನ್ನು ಮನಸ್ಸಿನಲ್ಲಿ ಗೂಡು ಕಟ್ಟಿಕೊಂಡಿರುತ್ತಾರೆ. ಇಂಥಹವರಿಗೆ ಒಂದು ವಿಷಯ ತಿಳಿದಿರಲಿ, ಮನುಷ್ಯನಿಗೆ ಸಾಧನೆ ಮಾಡಲು ಆಗದಿರುವುದು ಈ ಪ್ರಪಂಚದಲ್ಲಿ ಯಾವ ವಿಷಯವು ಇಲ್ಲ, ಏಕೆಂದರೆ ನಾನು ಸಾಧನೆ ಮಾಡಬೇಕು ಎಂದು ಗುರಿ ಇಟ್ಟುಕೊಂಡಿರುವುದನ್ನು ಪ್ರಪಂಚದಲ್ಲಿ ಅನೇಕ ಮನುಷ್ಯರು ಈಗಾಗಲೆ ಸಾಧಿಸಿದ್ದಾರೆ ಅಂದರೆ ಈಗ ಸಾಧಿಸಿದವರು ಮನುಷ್ಯರು ಅಂದ ಮೇಲೆ, ನಾನು ಸುಲಭವಾಗಿ ಸಾಧಿಸಬಹುದು ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ನಾವು ಮಾಡಬೇಕಾದ ಸಾಧನೆ ನಮ್ಮ ಮನಸ್ಸಿನ ಯೋಚನೆ ಮೇಲೆ ನಿಂತಿರುವುದು, ಇದನ್ನು ನಾವು ತೆಗೆದುಕೊಳ್ಳುವ ನಿರ್ಧಾರದಿಂದ ಸಾಧ್ಯ ಎನ್ನುವುದನ್ನು ಮರೆಯಬಾರದು. ಎಷ್ಟೇ ಕಷ್ಟವಿದ್ದರೂ ಸಾಧನೆಯನ್ನು ಮಾತ್ರ ಬಿಟ್ಟುಕೊಡಬಾರದು. “ಇಂದಿನ ಕಷ್ಟಗಳು, ಸಾಧನೆ ಮಾಡಿದ ಮೇಲೆ ಸಂಭ್ರಮಿಸಲು ಮತ್ತು ಇನ್ನೊಬ್ಬರಿಗೆ ಮಾದರಿಯಾಗಲು ಸಿಗುವ ಅವಕಾಶಗಳು” ಎಂದು ತಿಳಿದು ನಮ್ಮ ಮನಸ್ಸನ್ನು ಸದಾ ಗುರಿಯ ಕಡೆಗೆ ಯೋಚನೆ ಮಾಡುವಂತೆ ಮಾಡಬೇಕು.

ನಿಮ್ಮ ಗುರಿಯ ಬಗ್ಗೆ ಯಾರದರೂ ವಿಮರ್ಶೆ ಮಾಡಿದಾಗ, ಇಲ್ಲ ಯಾವುದೇ ಮಾನಸಿಕ ಒತ್ತಡಕ್ಕೆ ಸಿಲುಕಿ ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕೆಲವೊಂದು ಸಲ ಕಳೆದುಕೊಂಡು ಇಂಥಹ ಸಂದರ್ಭದಲ್ಲಿ ಪ್ರಪಂಚದಲ್ಲಿ ಸಾಧನೆ ಮಾಡಿದ ಅನೇಕ ಮಹಾನ್ ಹೆಸರಾಂತ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಓದಬೇಕು. ಇಲ್ಲದಿದ್ದರೆ ಇಂಥಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದ ನಿಮ್ಮ ಹಿರಿಯರು ಹಾಗೂ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು, ಆಗ ನಿಮಗೆ ನಿಮ್ಮಲ್ಲಿರುವ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ, ಅಲ್ಲದೆ ನಿಮ್ಮ ಗುರಿಯನ್ನು ತಲುಪಲು ಸಹಾಯವಾಗುತ್ತದೆ.

“ಪ್ರತಿಯೊಬ್ಬ ಮನುಷ್ಯನಿಗೂ ಯೋಚಿಸುವ ಶಕ್ತಿ ಮತ್ತು ಸಾಧಿಸುವ ಕನಸಿದ್ದರೆ, ಪ್ರಪಂಚದಲ್ಲಿ ಏನಾದರೂ ಸಾಧಿಸಬಹುದು", ಅದಕ್ಕೆ ನಾವು ತೆಗೆದುಕೊಳ್ಳುವ ನಿರ್ಧಾರ ನಿಖರವಾಗಿರಬೇಕು ಎಂಬುವುದನ್ನು ಯಾರೂ ಮರೆಯಬಾರದು.


Post a Comment (0)
Previous Post Next Post