ಭಾರತದಲ್ಲಿ ವಿಜ್ಞಾನಕ್ಕೆ ಸವಾಲಾಗಿರುವ ಅನೇಕ ಸಂಗತಿಗಳು ಆಗಾಗ ವರದಿಯಾಗುವುದು ಸಾಮಾನ್ಯ. ಅದೇ ರೀತಿ ಇಲ್ಲೊಂದು ವಿಸ್ಮಯಕಾರಿ ಮಳೆ ಮುನ್ಸೂಚನೆ ನೀಡುವ ದೇವಾಲಯದ ಬಗ್ಗೆ ತಿಳಿಯೋಣ.
ಅತ್ಯಂತ ಕುತೂಹಲಕಾರಿಯಾದ ಮಳೆಯ ಪ್ರಮಾಣದ ಮುನ್ಸೂಚನೆ ನೀಡುವ ಈ ಜಗನ್ನಾಥ ದೇವಾಲಯವು ಶತಮಾನಗಳಿಂದ ವಿಜ್ಞಾನಿಗಳ, ಇತಿಹಾಸಕಾರ ಮತ್ತು ಭಕ್ತರ ಆಸಕ್ತಿಯನ್ನು ಕೆರಳಿಸಿದೆ.
ಈ ದೇವಾಲಯವು ಆ ಪ್ರದೇಶದಲ್ಲಿನ ಮಳೆಯನ್ನು ನಿಖರವಾಗಿ ಮುನ್ಸೂಚಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ!
ಮಳೆಗಾಲ ಪ್ರಾರಂಭವಾಗುವ ಸುಮಾರು 5-7 ದಿನಗಳ ಮೊದಲು, ಗರ್ಭ ಗೃಹದ ಮೇಲ್ಛಾವಣಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ಹಾಕಲಾದ ಬರ್ಸಾತಿ ಪತ್ತರ್ (ಮಾನ್ಸೂನ್ ಕಲ್ಲುಗಳು) ನಿಂದ ನೀರಿನ ಹನಿಗಳು ತೊಟ್ಟಿಕ್ಕಲು ಪ್ರಾರಂಭಿಸುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ನೀರಿನ ಹನಿಗಳ ಸಂಖ್ಯೆ ಮತ್ತು ಗಾತ್ರವು ನಿರೀಕ್ಷಿತ ಮಳೆಯ ತೀವ್ರತೆಯ ಸೂಚನೆಯಾಗಿದೆ. ದೊಡ್ಡ ಗಾತ್ರ ಮತ್ತು ಹನಿಗಳ ಸಂಖ್ಯೆಯು ಆ ಪ್ರದೇಶದಲ್ಲಿನ ಮಳೆಯ ಪ್ರಮಾಣ ಹೆಚ್ಚು ಎಂದು ಸೂಚನೆ ನೀಡಿದರೆ, ಹನಿಗಳ ಸಣ್ಣ ಗಾತ್ರವು ಅಲ್ಪ ಪ್ರಮಾಣದ ಚದುರಿದ ಮಳೆ ಅಥವಾ ಬರಗಾಲದಂತಹ ಸ್ಥಿತಿಯನ್ನು ಸೂಚಿಸುತ್ತದೆ.
ಯಾವುದೇ ನೀರಿನ ಹನಿಗಳು ಕಾಣದಿದ್ದರೆ, ಆ ವರ್ಷದ ತೀವ್ರ ಬರಗಾಲವನ್ನು ಸೂಚಿಸುತ್ತದೆ.
50 ಕಿಮೀ ವ್ಯಾಪ್ತಿಯ ರೈತರು ತಮ್ಮ ಭೂಮಿಯನ್ನು ಈ ದೇವಾಲಯ ನೀಡುವ ಮುನ್ಸೂಚನೆಗೆ ಅನುಗುಣವಾಗಿ ಅಗತ್ಯ ವ್ಯವಸ್ಥೆಗಳನ್ನು ಬಹಳ ಶ್ರದ್ಧೆಯಿಂದ ಮಾಡಿಕೊಳ್ಳುತ್ತಾರೆ.
ವಿಜ್ಞಾನಿಗಳು ಮತ್ತು ಸಂಶೋಧಕರು ಅನೇಕ ಸಂಶೋಧನೆಗಳನ್ನು ನಡೆಸಿ ಈ ವಿಸ್ಮಯಕ್ಕೆ ಕಾರಣಗಳನ್ನು ತಿಳಿಯಲು ಪ್ರಯತ್ನಿಸಿ ವಿಫಲವಾಗಿದ್ದಾರೆ ಎನ್ನಲಾಗಿದೆ.
ಅತ್ಯಂತ ಆಕರ್ಷಕ ಅಂಶವೆಂದರೆ, ಮಳೆ ಪ್ರಾರಂಭವಾದ ಕ್ಷಣದಲ್ಲಿ ಸೀಲಿಂಗ್ ಸಂಪೂರ್ಣವಾಗಿ ಒಣಗುತ್ತದೆ.
ಗ್ರಾಮಸ್ಥರು ಈ ದೇವಾಲಯದ ಭವಿಷ್ಯವಾಣಿಗಳನ್ನು ಶತಮಾನಗಳಿಂದ ನಂಬಿಕೊಂಡು ಅದರಂತೆ ಪಾಲಿಸುತ್ತಾ ಬಂದಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ (ASI) ಮೇಲ್ವಿಚಾರಣೆಯಲ್ಲಿರುವ ಈ ದೇವಾಲಯವನ್ನು ನೋಡಲು ಜನ ದೂರದ ಊರುಗಳಿಂದ ಬರುವುದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ.
ಎಲ್ಲಿದೆ ಈ ದೇವಾಲಯ?
ಸ್ಥಳ: ಜಗನ್ನಾಥ ಮಂದಿರ, ಬೆಹ್ತಾ ಬುಜುರ್ಗ್, ಕಾನ್ಪುರ ಜಿಲ್ಲೆ, ಉತ್ತರ ಪ್ರದೇಶ.