ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಈ ಬೆನ್ನಲ್ಲೇ ಶೇ. 100ಕ್ಕೆ 100 ಅಂಕ ಪಡೆಯಲು ಸಾಧ್ಯವೇ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಮೇಲ್ನೋಟಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯಾಗಿದೆ ಎನಿಸಿದರೂ. ಇದು ಕೆಲವು ಗಂಭೀರ ಪ್ರಶ್ನೆ ಮೂಡಿಸುತ್ತದೆ. ಈ ಕುರಿತ ವಿಶ್ಲೇಷಣಾತ್ಮಕ ಬರಹ ಇಲ್ಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ (sslc result 2022) ಹೊರಬಿದ್ದಿದೆ. ಈ ಬಾರಿ ಶೇ.85.63ರಷ್ಟು ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 620ಕ್ಕೂ ಹೆಚ್ಚು ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಈ ಸಾಧನೆ ಪ್ರಶಂಸನಾರ್ಹ ಹೌದಾದರೂ, ಶೇ. 100ಕ್ಕೆ 100 ಅಂಕ ಪಡೆಯಲು ಸಾಧ್ಯವೇ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿ ಕಳೆದೊಂದು ದಶಕದಲ್ಲಿ ಹಲವು ಬದಲಾವಣೆ ಆಗಿರುವುದು ನಿಜ. ಎಲ್ಲ ಶಾಲೆಗಳು ಶೇ.100 ಫಲಿತಾಂಶ ಪಡೆಯುವತ್ತ ರೇಸ್‌ನಲ್ಲಿ ನಿಂತಿವೆ. ವಿದ್ಯಾರ್ಥಿಗಳು ಕೂಡ 625ಕ್ಕೆ 625 ಅಂಕ ಪಡೆಯುವ ನಿಟ್ಟಿನಲ್ಲೇ ಅಭ್ಯಾಸ ನಡೆಸುತ್ತಾರೆ. ವರ್ಷದಿಂದ ವರ್ಷಕ್ಕೆ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಇದೆಲ್ಲವನ್ನೂ ಗಮನಿಸಿದರೆ ಮೇಲ್ನೋಟಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯಾಗಿದೆ ಎನಿಸುತ್ತದೆ. ಆದರೆ, ಇದು ಕೆಲವು ಗಂಭೀರ ಪ್ರಶ್ನೆಗಳನ್ನೂ ಮೂಡಿಸುತ್ತದೆ.
ಸಾಮಾಜಿಕ ವಲಯದಲ್ಲಿ ಶಿಕ್ಷಣದ ಗುಣಮಟ್ಟದ ಕುರಿತು ಚರ್ಚೆ ನಡೆಯುವುದು ತೀರಾ ಕಡಿಮೆ. ಶಾಲೆಯಲ್ಲಿ ಹಾಲು, ಶೂ, ಮೊಟ್ಟೆ, ಬೈಸಿಕಲ್ ಕೊಡುವುದು ಇಂತಹ ವಿಚಾರಗಳು ಚರ್ಚೆಯಾದಂತೆ, ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಿರದ ಪ್ರಯೋಗಗಳ ಬಗ್ಗೆ ಚರ್ಚೆಯಾಗುವುದು ಕಡಿಮೆಯೇ. ಆದರೆ, ಈ ಬಾರಿ 625ಕ್ಕೆ 625 ಅಂಕ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಸಾಮಾಜಿಕ ವಲಯದಲ್ಲಿ ಚರ್ಚೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.
ನೂರಕ್ಕೆ ನೂರರಷ್ಟು ಅಂಕ ಪಡೆಯಲು ಸಾಧ್ಯವೇ?
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿಜಯಕರ್ನಾಟಕ ವೆಬ್‌ನ ಸಂಪಾದಕರಾದ ಪ್ರಸಾದ್ ನಾಯ್ಕ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ಚರ್ಚಾರ್ಹ ಪ್ರಶ್ನೆಗಳನ್ನು ಕೇಳಿದ್ದರು. "145 ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ. ಅವರಿಗೆ ಶುಭಾಶಯ. ಆದರೆ, ಇದು ಸಾಧ್ಯವಾದದ್ದಾರೂ ಹೇಗೆ? ಈಗಿನ ಪರೀಕ್ಷಾ ವಿಧಾನ ಅಷ್ಟು ಸರಳವಾಗಿದೆಯೇ? ಅಂಕ ನೀಡುವುದು ಇಷ್ಟು ಲಿಬರಲ್ ಆಗಿದೆಯೇ? ಅಥವಾ ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಅಷ್ಟು ಜಾಣರಾಗಿದ್ದಾರೆಯೇ? ನಾನು ಕಕ್ಕಾಬಿಕ್ಕಿ" ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.
ಇದಕ್ಕೆ ಹಲವು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಬಾರಿ ಪ್ರಶ್ನೆಗಳು ಸುಲಭವಾಗಿದ್ದವು. ಪರೀಕ್ಷೆಯನ್ನೇ ಉದಾರೀಕರಣ (ಲಿಬರಲ್) ಮಾಡಿದ್ದಾರೆ. ಮೊದಲಿನಂತೆ ಈಗ 100 ಅಂಕಗಳಿಗೂ ಪುಟಗಟ್ಟಲೆ ಉತ್ತರ ಬರೆಯಬೇಕಿಲ್ಲ. ನಾವು ಎಸ್.ಎಸ್.ಎಲ್.ಸಿ ಓದುವಾಗ 625ಕ್ಕೆ 625 ಅಂಕಗಳು ಬರಲು ಸಾಧ್ಯವೇ ಇರಲಿಲ್ಲ. ಹಿಂದೆ ದೋಷಪೂರಿತವಾಗಿದ್ದ ಶಿಕ್ಷಣ ವ್ಯವಸ್ಥೆಯನ್ನು ಈಗ ಸುಧಾರಿಸಲಾಗಿದೆ. ಈಗಿನ ತಲೆಮಾರಿನ ವಿದ್ಯಾರ್ಥಿಗಳು ಹಿಂದಿನ ತಲೆಮಾರಿಗಿಂತ ಹೆಚ್ಚು ಬುದ್ಧಿವಂತರಾಗಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮರು ಮೌಲ್ಯಮಾಪನಕ್ಕೆ ಹಾಕಿದರೆ, ಒಂದು ಅಂಕ ಹೆಚ್ಚು ಬಂದರೂ ಮೌಲ್ಯಮಾಪಕರಿಗೆ 3-4 ಸಾವಿರ ರೂ. ದಂಡ ವಿಧಿಸುತ್ತಾರೆ. ದಂಡ ಕಟ್ಟಲು ನಮಗೇನು ಹುಚ್ಚೇ? ಅದರ ಬದಲು ಧಾರಾಳವಾಗಿ ಅಂಕ ನೀಡುವುದೇ ಲೇಸು ಎಂಬ ಪ್ರತಿಕ್ರಿಯೆ ಹಲವು ರೀತಿಯಲ್ಲಿ ಯೋಚನೆಗೆ ಹಚ್ಚುತ್ತದೆ.
ಅಂಕಗಳಿಂದಲೇ ಕಲಿಕಾ ಮಟ್ಟ ಅಳೆಯುವುದು ಸಾಧ್ಯವೇ?
ನಿರ್ದಿಷ್ಟ ಪಠ್ಯಕ್ರಮದ ಅಭ್ಯಾಸದಿಂದ ಆಗಬೇಕಾದ ಬಹು ಆಯಾಮದ ಎಲ್ಲ ಕಲಿಕೆಗಳೂ ಸಾಧಿಸ್ಪಲ್ಪಟ್ಟಿದ್ದರೆ ಮಾತ್ರ 625ಕ್ಕೆ 625 ಅಂಕ ನೀಡಬಹುದು. ಆದರೆ, ವರ್ಷಪೂರ್ತಿ ಕಲಿತದ್ದನ್ನು ಮೂರು ಗಂಟೆಯಲ್ಲಿ ಪರೀಕ್ಷಿಸಿ ಅಂಕ ನೀಡುವುದು ಎಷ್ಟು ಸರಿ ಎಂಬ ವಾದವೂ ಇದೆ. ಒಂದು ವರ್ಷದಲ್ಲಿ ಕಲಿತ ಪಠ್ಯದ ಸಂಪೂರ್ಣ ಮೌಲ್ಯಮಾಪನ ವಾಸ್ತವದಲ್ಲಿ ಅಸಾಧ್ಯ. ಹೀಗಾಗಿ ಸ್ಯಾಂಪಲ್ ಮೂಲಕ ಮೌಲ್ಯಮಾಪನ ಮಾಡುವ ವಿಧಾನವೇ ಪರೀಕ್ಷೆ. ಇಲ್ಲಿ ಅನ್ನ ಬೆಂದಿದೆಯೇ? ಇಲ್ಲವೇ? ಎಂದು ತಿಳಿಯಲು ಒಂದೆರಡು ಅಗುಳನ್ನು ಪರೀಕ್ಷಿಸುವ ಹಾಗೆ ವರ್ಷದ ಕಲಿಕೆಯನ್ನು ಮೂರುಗಂಟೆಯ ಪರೀಕ್ಷೆಯ ವ್ಯಾಪ್ತಿಗೆ ಕಿರಿದುಗೊಳಿಸಿ ಪರೀಕ್ಷಿಸುವುದು ಅನಿವಾರ್ಯವಾಗುತ್ತದೆ. ಆದರೆ, ಕಲಿಕೆಯ ಎಲ್ಲ ದೃಷ್ಟಿಕೋನಗಳಲ್ಲಿಯೂ ಮೌಲ್ಯಮಾಪನಕ್ಕೆ ಒಳಪಡಿಸಿದರೆ, ಆಗ ನೂರಕ್ಕೆ ನೂರು ಅಂಕದ ಗಳಿಕೆ ಸಾಧ್ಯವಿಲ್ಲ.
ಹಿಂದೆ ಶೇ100 ಅಂಕ ಸಾಧ್ಯವಾಗುತ್ತಿರಲಿಲ್ಲ ಏಕೆ?
ಈ ಹಿಂದಿನ ಪರೀಕ್ಷಾ ಪದ್ಧತಿಯಲ್ಲಿ ವಾಕ್ಯ ರೂಪದ ಉತ್ತರಗಳನ್ನು ಬಯಸುವ ಪ್ರಶ್ನೆಗಳಿರುತ್ತಿದ್ದವು (ಬಹುಆಯ್ಕೆ ಮಾದರಿಯ ಪ್ರಶ್ನೆಗಳು ಇತ್ತೀಚೆಗೆ ಬಂದಿದ್ದು). ಇಲ್ಲಿ ಬಹು ಆಯಾಮಗಳಲ್ಲಿ ಸಾಮರ್ಥ್ಯ ಪರೀಕ್ಷಿಸಲಾಗುತ್ತಿತ್ತು. ಹೀಗಾಗಿ ಪ್ರಬಂಧ ಮಾದರಿಯ ಪ್ರಶ್ನೆಗಳಲ್ಲಿ ಪೂರ್ಣ ಅಂಕ ಪಡೆಯಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಇದೆ. ಉದಾಹರಣೆಗೆ ಭಾಷಾ ಪಠ್ಯಗಳಲ್ಲಿ ಪ್ರಬಂಧ ಬರೆಯುವುದು ಇರುತ್ತದೆ. ಎಷ್ಟು ಚೆನ್ನಾಗಿ ಪ್ರಬಂಧ ಬರೆದರೂ ಅಲ್ಲಿ ಹೇಳಬಹುದಾದ ಇನ್ನೊಂದಷ್ಟು ವಿಷಯಗಳು ಬಾಕಿ ಇದ್ದೇ ಇರುತ್ತದೆ. ಆದ್ದರಿಂದ ಎಂತಹ ಅದ್ಭುತ ಪ್ರಬಂಧಕ್ಕೂ ಪೂರ್ಣ ಅಂಕವನ್ನು ಕೊಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಯಾರೂ ಪರಿಪೂರ್ಣ ಜ್ನಾನಿಗಳಾಗಿರುವುದಿಲ್ಲ ಎಂಬುದರ ಸೂಚಕವಾಗಿ ಒಂದು ಅಂಕ ಕಡಿತಗೊಳಿಸುವ ಪದ್ದತಿ ಇದೆ ಎಂದು ಶಿಕ್ಷಕರು, ಲೇಖಕರೂ ಆಗಿರುವ ಅರವಿಂದ ಚೊಕ್ಕಾಡಿ ಅವರು ಒಂದು ಕಡೆ ಹೇಳಿದ್ದಾರೆ.
ಶೈಕ್ಷಣಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ನಡುವೆ ವೈರುಧ್ಯ
ನಮ್ಮಲ್ಲಿ ಶಿಕ್ಷಣಿಕ ಪರೀಕ್ಷೆಗಳ ಮೌಲ್ಯಮಾಪನ ಉದಾರಗೊಂಡು ಹಲವು ವರ್ಷಗಳೇ ಆಗಿವೆ. ಇದೀಗ 625ಕ್ಕೆ 625 ಅಂಕಗಳ ಮಟ್ಟಕ್ಕೆ ಬಂದು ನಿಂತಿದೆ. ಆದರೆ, ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಕಬ್ಬಿಣದ ಕಡಲೆಯಾಗುತ್ತ ಬಂದಿವೆ. ಉದಾಹರಣೆಗೆ ಉತ್ತಮ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯದ ಹೊರತು ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಪಾಸ್ ಮಾಡುವುದು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಕ್ಕೆ ಪರೀಕ್ಷಾ ಕಾಠಿಣ್ಯತೆ ಇರುತ್ತದೆ. ಹಾಗೆಯೇ ಐಎಎಸ್, ಕೆಎಎಸ್, ಸಿಎ ಹೀಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣವಾಗುತ್ತಲೇ ಬಂದಿವೆ. ಶೈಕ್ಷಣಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಶೇಕಡಾ 100 ಅಂಕ ಪಡೆದಿದ್ದಾರೆಯೇ ಎಂಬ ಸಮೀಕ್ಷೆ ನಡೆಸಬೇಕು. ಶೈಕ್ಷಣಿಕ ಪರೀಕ್ಷೆಯಲ್ಲಿ ಶೇ.100 ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇಕಡಾ 95 ಅಂಕವನ್ನಾದರೂ ಪಡೆದರೆ ಆಗ ಕಲಿಕಾ ಧಕ್ಷತೆ ಸಮರ್ಥವಿದೆ ಎಂದು ಸಾಬೀತಾಗುತ್ತದೆ.
ಶೈಕ್ಷಣಿಕ ಪರೀಕ್ಷೆಯಲ್ಲಿ ಶೇಕಡಾ 100 ಅಂಕ ಪಡೆದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇ. 60ಕ್ಕಿಂತ ಕಡಿಮೆ ಅಂಕ ಪಡೆದರೆ, ಮೌಲ್ಯಮಾಪನ ವ್ಯವಸ್ಥೆ ಪ್ರಶ್ನಾರ್ಹವಾಗಿ ಉಳಿಯುತ್ತದೆ. ಉದಾಹರಣೆಗೆ ಐಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಬಹುತೇಕರು ಶೈಕ್ಷಣಿಕ ಪರೀಕ್ಷೆಯಲ್ಲಿ ಟಾಪರ್ ಆಗಿರಲಿಲ್ಲ ಎಂಬುದು ಗಮನಾರ್ಹ. ಇದರಿಂದ ಪಡೆದ ಅಂಕಗಳು ಕಲಿಕಾ ಧಕ್ಷತೆಯ ಮಾನದಂಡವಲ್ಲ ಎಂಬುದು ಸಾಬೀತಾಗುತ್ತದೆ. ಇದು ಅರ್ಥವಾದರೆ ಶೇ.100ರ ಗೀಳಿಗೆ ಕಡಿವಾಣ ಬೀಳಬಹುದು ಅಲ್ಲವೇ.
- ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ